ಭಾರತದ ವಿಷಪೂರಿತ ಹಾವು ಯಾವುವು
Answers
Answer:
ಭಾರತದಲ್ಲಿ ಕಂಡು ಬರುವ ವಿಷಕಾರಿ ಹಾವುಗಳು ಯಾವುವು?
ಭಾರತದಲ್ಲಿ ಕಂಡುಬರುವ ಹಾವುಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ವಿಷಕಾರಿ ಹಾವುಗಳು ಮತ್ತು ವಿಷಕಾರಿ ಅಲ್ಲದ ಹಾವುಗಳು ಎಂದು ಎರಡು ವಿಧಗಳಿವೆ. ವಿಷಕಾರಿ ಹಾವುಗಳಲ್ಲಿ ಎರಡು ವಿಷಗಳಿವೆ. ಅವುಗಳಲ್ಲಿ ಮೊದಲನೆಯದು ವಿಷಕಾರಿ (venomous snakes) ಹಾವುಗಳು ಮತ್ತು ಎರಡನೆಯದು ಅಲ್ಪ ವಿಷಕಾರಿ (mildly venomous) ಹಾವುಗಳು. ವಿಷಕಾರಿ ಹಾವುಗಳು ಮನುಷ್ಯರಿಗೆ ಕಚ್ಚಿದ್ದಲ್ಲಿ ಸಾವು ಸಂಭವಿಸಬಹುದು. ಆದರೆ ಅಲ್ಪ ವಿಷಕಾರಿ ಹಾವುಗಳ ವಿಷ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟು ಮಾಡುವುದಿಲ್ಲ.
ಹಾವುಗಳಿಗೆ ವಿಷ ಇರುವುದು ಮುಖ್ಯವಾಗಿ ಅವುಗಳು ಬೇಟೆಯಾಡುವ ಜೀವಿಯನ್ನು ಸಾಯಿಸಲು ಮತ್ತು ತಿಂದು ಅವುಗಳನ್ನು ಜೀರ್ಣಿಸಿಕೊಳ್ಳಲು. ಹಾವುಗಳು ಮನುಷ್ಯರಿಗೆ ಕಚ್ಚುವುದು ಅವುಗಳಿಗೆ ಭಯವಾದಾಗ ಮತ್ತು ಅವುಗಳಿಗೆ ನಮ್ಮಿಂದ ಅಪಾಯವಿದೆ ಅನಿಸಿದಾಗ. ಅನೇಕ ಬಾರಿ ವಿಷವಿಲ್ಲದ ಹಾವುಗಳು ಕಡಿದಾಗಲೂ ಮನುಷ್ಯರು ಸಾವನ್ನಪ್ಪಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭಯ. ಹಾವುಗಳು ಕಚ್ಚಿದಾಗ ಮನುಷ್ಯರು ಭಯಭೀತರಾಗದೇ ಕಚ್ಚಿದ ಹಾವು ನೋಡಲು ಹೇಗಿತ್ತು ಎಂದು ತಿಳಿದುಕೊಳ್ಳಲು ಪ್ರಯತ್ನ ಪಟ್ಟರೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ.
ಮನುಷ್ಯರಿಗೆ ಸಾವನ್ನು ಉಂಟು ಮಾಡಬಹುದಾದಂತಹ ಭಾರತದಲ್ಲಿ ಕಂಡು ಬರುವ ವಿಷಕಾರಿ ಹಾವುಗಳು ಈ ಕೆಳಗಿನಂತಿವೆ.
ಕಟ್ಟಿಗೆ ಹಾವು :
ಕಟ್ಟಿಗೆ ಹಾವು ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾವು. ಇದು ಸರಿ ಸುಮಾರು ೩ರಿಂದ ೬ ಅಡಿಗಳಷ್ಟು ಉದ್ದವಿರುತ್ತವೆ. ಹೆಚ್ಚಿನ ಜನರ ಸಾವಿಗೆ ಕಾರಣವಾದ ಹಾವು. ಹೆಚ್ಚಿನವರು ಕಟ್ಟಿಗೆ ಹಾವನ್ನು ತೋಳ ಹಾವು ಎಂದು ತಪ್ಪಾಗಿ ಎನಿಸಿ ಕಡಿತವನ್ನು ನಿರ್ಲಕ್ಷ್ಯ ತೋರಿ ಸಾವನ್ನಪ್ಪಿರುವುದು ಜಾಸ್ತಿ ಇದೆ. ಕಟ್ಟಿಗೆ ಹಾವು ಬಿಸಿಯಾಗಿರುವ ಪ್ರದೇಶದಲ್ಲಿ ಇರಲು ಬಯಸುತ್ತದೆ. ಹಾಗಾಗಿ ಹಳ್ಳಿ ಪ್ರದೇಶದಲ್ಲಿ ಮನೆಯ ಹೊರಗೆ, ಜೋಪಡಿಗಳಲ್ಲಿ ಮಲಗುವ ಜನರ ಚಾಪೆಯ ಕೆಳಗೆ ಕುಳಿತು ಜನರು ನಿದ್ದೆಯಲ್ಲಿರುವಾಗ ಕಚ್ಚಿ ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಇದನ್ನು ಬಳೆ ಒಡಕ ಎಂದೂ ಕರೆಯುತ್ತಾರೆ.
ಕೊಳಕು ಮಂಡಲ :
ಭಾರತದಲ್ಲಿ ಹಾಗೂ ದಕ್ಷಿಣ ಏಷಿಯಾದಲ್ಲಿ ಕಂಡು ಬರುವ ಈ ಹಾವು ಅರಶಿನ ಬಣ್ಣದ ಮೇಲೆ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತದೆ. ಸುಮಾರು ೪ ರಿಂದ ೫.೫ ಅಡಿಗಳಷ್ಟು ಉದ್ದಕ್ಕೆ ಬೆಳೆಯುತ್ತದೆ. ಇದು ತುಂಬಾ ಅಪಾಯಕಾರಿ ಮತ್ತು ಹಾವು ನಮ್ಮನ್ನು ನೋಡಿ ಭಯಗೊಂಡ ತಕ್ಷಣ ದಾಳಿ ಮಾಡಲು ಮುಂದಾಗುತ್ತದೆ ಮತ್ತು ಹಿಂಜರಿಯುವುದಿಲ್ಲ.
ಗರಗಸ ಮಂಡಲ:
ಇವುಗಳು ಮಂಡಲ ಹಾವುಗಳಲ್ಲಿ ತುಂಬಾ ಸಣ್ಣವು. ಆದರೆ ಇವುಗಳ ಕಡಿತ ಕೆಲವೇ ಗಂಟೆಗಳಲ್ಲಿ ಸಾವನ್ನು ತರಬಹುದು. ಇವುಗಳು ಸುಮಾರು ಒಂದು ಅಡಿ ಉದ್ದದ ವರೆಗೆ ಬೆಳೆಯುತ್ತವೆ ಮತ್ತು ಒಣ ಪ್ರದೇಶ ಮತ್ತು ಕಲ್ಲುಗಳಿರುವ ಪ್ರದೇಶದಲ್ಲಿ ವಾಸಿಸುತ್ತವೆ. ಇವುಗಳ ಇರುವಿಕೆ ಗೊತ್ತಾಗುವುದು ಹೇಗೆಂದರೆ ಇದು ತಮ್ಮ ಮೈ ಮೇಲಿನ ಮುಳ್ಳು ಮುಳ್ಳಾದ ಚರ್ಮವನ್ನು ಪರಸ್ಪರ ಉಜ್ಜಿಕೊಂಡು ಸ್ವರವನ್ನು ಉಂಟು ಮಾಡುತ್ತವೆ. ಈ ಹಾವುಗಳು ಕಾಣಲು ಕಂದು ಬಣ್ಣದಲ್ಲಿ ಇರುವುದರಿಂದ ಗುರುತಿಸುವುದು ಸ್ವಲ್ಪ ಕಷ್ಟ. ಕೆಲವು ವರ್ಷಗಳ ಹಿಂದೆ ತೆಗೆದ ಚಿತ್ರ ಲಗತ್ತಿಸಿದ್ದೇನೆ.
ನಾಗರ ಹಾವು (Indian cobra (Naja naja))
ಇದು ಸಾಮಾನ್ಯವಾಗಿ ಭಾರತದಲ್ಲಿ ಗದ್ದೆಗಳಲ್ಲಿ ಮತ್ತು ಎಲ್ಲ ಕಡೆಯೂ ಕಂಡು ಬರುವ ಹಾವು. ಇದು ಅರಶಿನ ಬಣ್ಣದಲ್ಲಿ ಇರುತ್ತದೆ ಮತ್ತು ತನಗೆ ಭಯವಾದಾಗ ಹೆಡೆಯೆತ್ತಿ ನಿಂತು ಬುಸುಗುಡುತ್ತದೆ. ನೋಡಲು ಭಯಾನಕವಾಗಿ ಕಂಡರೂ ಇದು ತುಂಬಾ ಪಾಪದ ಹಾವು. ಯಾಕೆಂದರೆ ಮಂಡಲ ಹಾವುಗಳಂತೆ ಇವುಗಳು ಒಮ್ಮಿಂದೊಮ್ಮೆಲೆ ಕಚ್ಚುವುದಿಲ್ಲ ಮತ್ತು ಎಲ್ಲ ಕಡಿತದಲ್ಲಿ ವಿಷ ಹೊರಹಾಕುದಿಲ್ಲ. ಮತ್ತು ಗದ್ದೆಗಳಲ್ಲಿ ಹೆಚ್ಚಾಗಿ ಇಲಿಗಳನ್ನು ಹಿಡಿದು ತಿಂದು ಜೀವಿಸುತ್ತವೆ.