ಅಂಚೆ ವ್ಯವಸ್ಥೆಯ ಬೆಳವಣಿಗೆಯ ಬಗ್ಗೆ ಬರೆಯಿರಿ ?
Answers
Answer:
ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ ಅಂಚೆ ವ್ಯವಸ್ಥೆ (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು. ಅಂಚೆ ಪತ್ರಗಳನ್ನು ಮತ್ತು ಚಿಕ್ಕ ಪುಟ್ಟ ಪೊಟ್ಟಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆ. ಅಂಚೆ ವ್ಯವಸ್ಥೆಗಳು ಹೆಚ್ಚಾಗಿ ಸರಕಾರಿ ವ್ಯವಸ್ಥೆಗಳಾಗಿರುತ್ತವೆ. ಈ ಸಾಗುವಣೆಗೆ ಶುಲ್ಕ ನೀಡಿರುವ ಗುರುತಾಗಿ ಸಾಮಾನ್ಯವಾಗಿ ಅಂಚೆ ಚೀಟಿಗಳನ್ನು ಪತ್ರಕ್ಕೆ ಲಗತ್ತಿಸಲಾಗುತ್ತದೆ. ಅಂಚೆ ಇತಿಹಾಸ ಬಹಳ ಪುರಾತನ ವಾದದ್ದು. ಬಹು ಹಿಂದೆ ಪೂರ್ವದೇಶಗಳಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಚಕ್ರಾಧಿಪತ್ಯಗಳ ಕಾಲದಲ್ಲಿಯೂ ಅಂಚೆ ವ್ಯವಸ್ಥೆಯಿದ್ದುದು ತಿಳಿದು ಬಂದಿದೆ. ಆ ಕಾಲದ ಚಕ್ರಾಧಿಪತ್ಯಗಳಿಗೆ ಒಳಪಟ್ಟಿದ್ದ ವಿಶಾಲವಾದ ಭೂ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಲು ಈ ವ್ಯವಸ್ಥೆ ಅಗತ್ಯವಾಗಿತ್ತು. ಬಹು ಪುರಾತನವಾದ ಪರ್ಷಿಯ ಚಕ್ರಾಧಿಪತ್ಯದಲ್ಲಿ ಅಂಚೆ ವ್ಯವಸ್ಥೆಯಿತ್ತೆಂಬುದಾಗಿ ಗೊತ್ತಾಗಿದೆ. ಅನಂತರ ಬಂದ ಮೆಸಿಡೋನಿಯನ್ನರೂ ಅಲ್ಪಪ್ರಮಾಣದಲ್ಲಿ ಈ ವ್ಯವಸ್ಥೆಯನ್ನಿಟ್ಟುಕೊಂಡಿದ್ದರು. ರೋಮನ್ ಚಕ್ರಾಧಿಪತ್ಯದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತು. ಈ ಚಕ್ರಾಧಿಪತ್ಯಗಳು ಕ್ಷೀಣಿಸಿ, ಮತ್ತೆ ಅನಾಗರಿಕತೆಯ ಸ್ಥಿತಿ ಬಂದಾಗ ಅಂಚೆಯ ವ್ಯವಸ್ಥೆಯೂ ಅಳಿಸಿಹೋಯಿತು
ಆಗಿನ ಕಾಲದಲ್ಲಿ ಖಾಸಗಿ ಪತ್ರಗಳನ್ನು ಒಂದೆಡೆಯಿಂದ ಇನ್ನೊಂದು ಎಡೆಗೆ ಸಾಗಿಸುವ ಜವಾಬ್ದಾರಿ ಸರ್ಕಾರದ್ದಾಗಿರಲಿಲ್ಲ. ಮಧ್ಯಯುಗದಲ್ಲಿಯೂ ಕೂಡ ಸರ್ಕಾರ ಈ ಹೊಣೆ ಹೊತ್ತಿರಲಿಲ್ಲ. ಆ ಕಾಲದಲ್ಲಿ ವಿಶ್ವವಿದ್ಯಾನಿಲಯಗಳೂ ವರ್ತಕಶ್ರೇಣಿಗಳೂ ಈ ಕೆಲಸ ನಿರ್ವಹಿಸುತ್ತಿದ್ದವು. ಕ್ರಮೇಣ ಯುರೋಪಿನ ಸರ್ಕಾರಗಳಿಗೆ ಇದರ ಆವಶ್ಯಕತೆಯ ಅರಿವು ಹೆಚ್ಚಾಯಿತು. ಒಂದು ರಾಷ್ಟ್ರದ ಜನರು ಇನ್ನೊಂದು ರಾಷ್ಟ್ರದವರೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರವನ್ನು ಪರಾಮರ್ಶಿಸಿ ದೇಶದ ಹಿತಕ್ಕೆ ವಿರೋಧವಾಗಿರದಂತೆ ಅದನ್ನು ನಿಯಂತ್ರಿಸುವುದು ಅಗತ್ಯವಾಯಿತು.
ಅಲ್ಲದೆ ಖಾಸಗಿಯವರ ಪತ್ರಗಳನ್ನು ಸಾಗಿಸುವ ವ್ಯವಸ್ಥೆಯಿಂದ ಹೆಚ್ಚು ವರಮಾನವನ್ನು ದೊರಕಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೆಂಬುದು ಹೆಚ್ಚು ಹೆಚ್ಚಾಗಿ ಮನವರಿಕೆಯಾಯಿತು. 17ನೆಯ ಶತಮಾನದಲ್ಲಿ ಇಂಗ್ಲೆಂಡಿನ ಅಂಚೆ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿ ಬೆಳೆಯಿತು. ಥಾಮಸ್ ವಿದರಿಂಗ್ಸ್ ಎಂಬುವನು ಇಂಗ್ಲೆಂಡಿನಲ್ಲಿ ಅಂಚೆ ವ್ಯವಸ್ಥೆಯನ್ನು ಬಹಳವಾಗಿ ಸುಧಾರಿಸಿದ. ಹೊರನಾಡಿನಲ್ಲೂ ಒಳನಾಡಿನಲ್ಲೂ ಅಂಚೆ ಸಿಬ್ಬಂದಿಯನ್ನು ನೇಮಿಸಿದ; ಅಂಚೆ ಮನೆಗಳನ್ನು ಸ್ಥಾಪಿಸಿದ; ಪತ್ರಗಳನ್ನು ಸಾಗಿಸಬೇಕಾದ ದೂರಕ್ಕೆ ತಕ್ಕಂತೆ ಶುಲ್ಕ ವಿಧಿಸಿದ; ದಿನಕ್ಕೆ ನೂರಿಪ್ಪತ್ತು ಮೈಲಿಗಳಂತೆ ಹಗಲೂ ರಾತ್ರಿಯೂ ಇವು ಸಾಗುವಂತೆ ಏರ್ಪಡಿಸಿದ.
ಅಂಚೆ ವ್ಯವಸ್ಥೆಯಿಂದ ಸರ್ಕಾರಕ್ಕೆ ವರಮಾನವನ್ನು ದೊರಕಿಸಿಕೊಳ್ಳುವ ಸಾಧ್ಯತೆಯೂ 17ನೆಯ ಶತಮಾನದಲ್ಲಿ ಖಚಿತವಾಯಿತು. ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಹಕ್ಕನ್ನು ಖಾಸಗಿಯವರಿಗೆ ಗುತ್ತಿಗೆಗೆ ಕೊಡುವ ಪದ್ಧತಿ ಏರ್ಪಟ್ಟಿತು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ ಇಷ್ಟೆಂದು ವರಮಾನ ದೊರಕುತ್ತಿತ್ತು. ಆದರೆ ಕ್ರಮೇಣ ಸರ್ಕಾರ ಖಾಸಗಿಯವರಲ್ಲಿದ್ದ ಈ ಹಕ್ಕನ್ನು ಪರಿಹಾರಕೊಟ್ಟು ಕೊಂಡುಕೊಂಡಿತು. ಅಂತೂ 19ನೆಯ ಶತಮಾನದ ನಡುಗಾಲದವರೆಗೂ ಕೆಲವರಿಗೆ ಈ ಹಕ್ಕು ಇತ್ತು.