India Languages, asked by sshreyas818, 2 months ago

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ​

Answers

Answered by bhuvaneshwariks81
7

Answer:

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’

ಗಾದೆಯು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದ್ದು, ಜನಸಾಮಾನ್ಯರ ಜೀವನ ಹಾಗೂ ಭಾಷೆಯಲ್ಲಿ ಹಾಸು ಹೊಕ್ಕಾಗಿ ವ್ಯಾಪಕವಾಗಿದೆ. ಆಡುಮಾತಿನ ಜೀವಸತ್ವಗಳೇ ಆಗಿವೆ ಎಂದರೆ ತಪ್ಪಾಗಲಾರದು. ಊಟಕ್ಕೆ ಉಪ್ಪಿನಕಾಯಿಯಂತೆ ಮಾತಿಗೆ ಗಾದೆಗಳು ವ್ಯಂಜನಶಕ್ತಿಯನ್ನು ಒದಗಿಸುತ್ತವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾದೆಗಳು ಗಾತ್ರದಲ್ಲಿ ಬಿಂದುವಿನಂತಿದ್ದರೂ ಅರ್ಥದಲ್ಲಿ ಸಿಂಧುವೇ ಎನಿಸಿವೆ.

‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ’ ಎಂಬ ಗಾದೆ ದಿನ ನಿತ್ಯದ ಮಾತಿನಲ್ಲಿ ಹೆಚ್ಚು ಬಳಕೆಯಲ್ಲಿದೆ. ಯಾವುದೇ ವಸ್ತುವನ್ನು ತಯಾರಿಸಲು ಸಿದ್ಧತೆ ಬೇಕು. ಪರಿಶ್ರಮ ಬೇಕು, ಕಾಲಾವಕಾಶವೂ ಬೇಕು. ಈ ಗಾದೆಯ ಹಿಂದೆ ಸಂಭವಿಸಿರಬಹುದಾದ ಘಟನೆಯನ್ನು ನಾವು ಸುಲಭವಾಗಿ ಊಹಿಸ ಬಹುದಾಗಿದೆ. ಕುಂಬಾರನೊಬ್ಬ ಹಲವಾರುದಿನಗಳ ಸಿದ್ಧತೆಗಳನ್ನು ಮಾಡಿಕೊಂಡು, ಬೆವರು ಸುರಿಸಿ ಮಡಕೆಗಳನ್ನು ತಯಾರಿಸುತ್ತಾನೆ. ಹೀಗೆ ಪರಿಶ್ರಮದಿಂದ ತಯಾರಿಸಿದ ಮಡಕೆಯನ್ನು ಸುಲಭವಾಗಿ ಒಡೆದು ಹಾಕಿ ಬಿಡುಹುದು. ದೊಣ್ಣೆಯನ್ನು ಬೀಸಿ ನಿಮಿಷ ಮಾತ್ರದಲ್ಲಿ ನಾಶಮಾಡಿದ ಅನಾಹುತ ಘಟನೆಯನ್ನು ಕಣ್ಣಾರೆಕಂಡ ಚಿಂತಕನೊಬ್ಬನು ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂದು ಉದ್ಗರಿಸಿರಬೇಕು. ಸ್ವಾನುಭವದಿಂದ ಪ್ರಜ್ಞಾವಂತ ಜಾಣನೊಬ್ಬನು ಸಾರ್ವಜನಿಕ ಸತ್ಯದ ಈ ನಿಪುಣನುಡಿಯನ್ನು ಸೆರೆಹಿಡಿಯುವ ಸಾಹಸ ಮಾಡಿದ್ದಾನೆಂದರೆ ತಪ್ಪಾಗಲಾರದು. ಮನಮುಟ್ಟುವ, ಮನಮಿಡಿಯುವ ವಾಸ್ತವಿಕಕ್ಕೆ ಸನಿಹವಾದ ಈ ನುಡಿ ಸೃಷ್ಟಿಯಾದ ಕ್ಷಣದಿಂದ ಇಂದಿನವರೆಗೂ ಜನರ ಬಾಯಲ್ಲಿ ಅವಿರತವಾಗಿ ಹರಿದು ಬಂದು ಪ್ರತಿನಿತ್ಯ ಪ್ರತಿಕ್ಷಣವೂ ಸತ್ಯ ದರ್ಶನವನ್ನು ಮಾಡಿಸುತ್ತಿದೆ.

ಒಳ್ಳೆಯದನ್ನು ಮಾಡುವುದು ಕಷ್ಟ. ಕೆಟ್ಟದ್ದನ್ನು ಮಾಡುವುದು, ಹಾಳುಮಾಡುವುದು ಸುಲಭ. ಯಾವುದೇ ಒಂದನ್ನು ಸೃಷ್ಟಿ ಮಾಡುವುದು ಕಷ್ಟಮಾತ್ರವಲ್ಲ, ಸಾಕಷ್ಟು ಸಮಯಾವಕಾಶ ಬೇಕು. ನಾಶ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬ ವಿಚಾರವನ್ನು ಈ ಗಾದೆ ಸ್ಪಷ್ಟಪಡಿಸುತ್ತದೆ.

ಬ್ರಹ್ಮನ ಹಲವಾರು ದಿನಗಳ, ತಿಂಗಳ, ವರ್ಷಗಳ ಸೃಷ್ಟಿಯನ್ನು ಕಾಲದೇವ ನಿಮಿಷಮಾತ್ರದಲ್ಲಿ ನೊಣೆದು ನುಂಗಿ ತೇಗಿಬಿಡುತ್ತಾನೆ. ತಾಯಿಯ ಗರ್ಭದಲ್ಲಿ ಅಂಕುರಿಸಿದ ಭ್ರೂಣ ಪೂರ್ಣ ಮಗುವಿನ ರೂಪದಲ್ಲಿ ಜನ್ಮತಳೆಯಲು ಒಂಬತ್ತು ತಿಂಗಳು ಬೇಕಾಗುತ್ತದೆ. ಬೆಳೆದು ದೊಡ್ಡವರಾಗಲು ಅನೇಕ ಹಂತಗಳನ್ನು ದಾಟಬೇಕಾಗುತ್ತದೆ. ವರ್ಷ ವರ್ಷಗಳನ್ನು ಕಳೆಯ ಬೇಕಾಗುತ್ತದೆ. ತಿಳಿಗೇಡಿಗಳು, ಕೊಲೆಗಡುಕರು, ಭಯೋತ್ಪಾದಕರು ಕ್ಷಣಮಾತ್ರದಲ್ಲಿ ಜೀವವನ್ನು ತೆಗೆದುಬಿಡುತ್ತಾರೆ.

ಪ್ರಾಕೃತಿಕ ಸಂಪತ್ತುಗಳು ರೂಪುಗೊಂಡು ಸಮೃದ್ಧವಾಗಿ ಬೆಳೆಯಲು ಕೋಟ್ಯಂತರ ವರ್ಷಗಳೇ ಬೇಕು. ಇಂತಹ ಪ್ರಕೃತಿ ಸಂಪನ್ಮೂಲಗಳನ್ನು ಮನುಷ್ಯ ತನ್ನ ದುರಾಸೆಯಿಂದ ಕೆಲವೇ ವರ್ಷಗಳಲ್ಲಿ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾನೆ. ಒಕ್ಕಲು ಮಾಡಲು, ಹೊಲ, ಗದ್ದೆ, ತೋಟವನ್ನು ಅಭಿವೃದ್ಧಿಗೊಳಿಸಲು ಹಾಗೂ ಮನೆ, ಮಠ, ಸಂಸ್ಥೆ ಮುಂತಾದವನ್ನು ಕಟ್ಟಿ ಬೆಳೆಸಲು ಹೆಚ್ಚಿನ ಪರಿಶ್ರಮ ಬೇಕು, ಕಾಲಾವಕಾಶವೂ ಬೇಕೇ ಬೇಕು. ನಾಶಮಾಡಲು ಹೆಚ್ಚಿನ ಸಮಯ ಬೇಕಿಲ್ಲ. ಪ್ರವಾಹ, ಬರಗಾಲ, ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಅಂತೆಯೇ ಮದ, ಮತ್ಸರ, ಮೋಹ, ಕಾಮ, ಕ್ರೋದ ಮುಂತಾದ ದುರ್ಗುಣಗಳು ಕ್ಷಣಮಾತ್ರದಲ್ಲಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆ ಮಾಡಿಬಿಡುತ್ತವೆ.

‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ' ಎಂಬ ಗಾದೆಯಲ್ಲಿ ನಾಲ್ಕೇ ನಾಲ್ಕು ಪದಗಳಿದ್ದರೂ ಧ್ವನಿಯಲ್ಲಿ ಅಣಕವಿದೆ. ಮೊದಲೆರಡು ಪದಗಳು ನಿರ್ಮಾಣದ ಬಗೆಗೆ ಹೇಳಿದರೆ. ಕೊನೆಯೆರಡು ಪದಗಳು ವಿನಾಶದ ಬಗೆಗೆ ಹೇಳುತ್ತವೆ.

ಚಿಕ್ಕದಾಗಿ, ಚೊಕ್ಕವಾಗಿ ಹೇಳ ಬೇಕಾದರೆ ಸೂಚ್ಯವಾಗಿ ತಿಳಿಸಬೇಕಾದುದನ್ನು ಸೂಚಿಸಲು ಇಂತಹ ರೂಪಕಗಳನ್ನು ಬಳಸುತ್ತೇವೆ. ಕುಂಬಾರಿಕೆಯ ಕ್ರಿಯಾಶಕ್ತಿ ಮತ್ತು ದೊಣ್ಣೆಯ ವಿನಾಶಕಾರಕ ರೂಪಕ ಈ ಗಾದೆಯ ಸ್ವಾರಸ್ಯವಾಗಿದೆ.

Answered by Anonymous
1

Answer:

ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ.

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು.

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

Be Brainly

Similar questions