ಕನ್ನಡ ಛಂದಸ್ಸಿನ ಸಂಕ್ಷಿಪ್ತ ಇತಿಹಾಸ
ಈ ವಿಷಯದ ಬಗ್ಗೆ ಒಂದು ಪ್ರಭಂದ ಬರೆಯಿರಿ
Answers
* ಕನ್ನಡ ಛಂದಸ್ಸು *
ಪರಿಚಯ:
ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.ಕನ್ನಡ ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆ ಬಹಳಷ್ಟಿದೆ.
ವಿವರಣೆ:
- ಕನ್ನಡ ಛಂದಸ್ಸನ್ನು ಕುರಿತ ಇತಿಹಾಸದ ವಿವಿಧ ಗ್ರಂಥಗಳು.
ಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿಯೇ (ಪ್ರ.ಶ.ಸು. 850) ಕನ್ನಡ ಛಂದಸ್ಸಿಗೆ ಸಂಬಂಧಿಸಿದ ವಿಷಯಗಳಾದ ಯತಿ, ಛಂದೋಭಂಗ, ಗುರುಲಘುದೋಷಗಳು, ಪ್ರಾಸ-ಇವುಗಳ ಪ್ರಸ್ತಾಪವಿದೆ. ಕನ್ನಡ ಕವಿಗಳು ಮುಖ್ಯವಾಗಿ ಸಂಸ್ಕೃತ ಛಂದಸ್ಸಿನಲ್ಲಿ ಸ್ವಾತಂತ್ರ್ಯವಹಿಸಿ ಮಾಡಿಕೊಂಡ ಮಾರ್ಪಾಡುಗಳು, ಅವುಗಳಿಂದಾದ ಪರಿಣಾಮಗಳು-ಇವುಗಳ ಸ್ವರೂಪ ಸ್ಪಲ್ಪಮಟ್ಟಿಗೆ ಆ ವಿಷಯಗಳಿಂದ ತಿಳಿಯುತ್ತದೆ. ತಮಿಳು ಭಾಷೆಯ ಯಾಪ್ಪರುಂಗಲಕ್ಕಾರಿಹೈ ಎಂಬ ಪ್ರಾಚೀನ ಛಂದೋಗ್ರಂಥದ ವ್ಯಾಖ್ಯಾನದಲ್ಲಿ ಗುಣಗಾಂಕಿಯಂ ಎಂಬ ಕನ್ನಡ ಛಂದೋಗ್ರಂಥದ ಉಲ್ಲೇಖವಿದೆ. ಇದು ಈವರೆಗೆ ದೊರೆತಿಲ್ಲ. ಅಲ್ಲದೆ ಈ ಗ್ರಂಥದ ಅಸ್ತಿತ್ವ, ಕರ್ತೃತ್ವ, ಕಾಲ ಎಲ್ಲವೂ ತೀರ ಅನಿಶ್ಚಿತವೂ ವಿವಾದಾಸ್ಪದವೂ ಆಗಿವೆ. ಮೂರನೆಯ ವಿಜಯಾದಿತ್ಯನೆಂಬ ಪುರ್ವಚಾಳುಕ್ಯ ರಾಜನಿಗೆ ಅಂಕಿತ ಮಾಡಿರಬಹುದಾದ, ಸು, 9ನೆಯ ಶತಮಾನದ ಕೃತಿಯಿದು ಎಂಬುದಾಗಿ ಊಹಿಸಲಾಗಿದೆ. 1ನೆಯ ನಾಗವರ್ಮನ (ಪ್ರ.ಶ.ಸು. 990) ಛಂದೋಂಬುಧಿ ಉಪಲಬ್ಧವಾದ ಕನ್ನಡ ಛಂದೋಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು.
ಪ್ರಸಿದ್ಧ ಶಾಸ್ತ್ರಜ್ಞನಾದ ಇಮ್ಮಡಿ ನಾಗವರ್ಮ (ಸು.1145) ಛಂದೋವಿಚಿತಿ ಎಂಬೊಂದು ಗ್ರಂಥವನ್ನು ಅಥವಾ ಛಂದಶ್ಶಾಸ್ತ್ರವನ್ನು ಕುರಿತ ಗ್ರಂಥವೊಂದನ್ನು ಬರೆದಿದ್ದಂತೆ ಕಾವ್ಯಾವಲೋಕದಲ್ಲಿ ದೊರೆಯುವ ಒಂದು ಆಧಾರದಿಂದ ತಿಳಿಯುತ್ತದೆ. ಇದು ಈವರೆಗೆ ದೊರೆತಿಲ್ಲ. ಈಶ್ವರ ಕವಿಯ (ಪ್ರ.ಶ. ಸು. 1500) ಕವಿಜಿಹ್ವಾಬಂಧನಂ ಒಂದು ರೀತಿಯ ಸಮ್ಮಿಶ್ರ ಗ್ರಂಥವಾದರೂ ಮುಖ್ಯವಾಗಿ ಛಂದಶ್ಶಾಸ್ತ್ರವನ್ನು ಕುರಿತದ್ದು. ಈ ಗ್ರಂಥದ ಮೊದಲ ಮೂರು ಆಶ್ವಾಸಗಳಲ್ಲಿ ಪ್ರಧಾನವಾಗಿ ಛಂದಶ್ಶಾಸ್ತ್ರದ ಸಂಜ್ಞಾಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಮಾತ್ರ ಬಂದಿವೆ. ಅಲ್ಲಲ್ಲಿ ತೆಲುಗು ಛಂದೋಗ್ರಂಥಗಳ ಪ್ರತಿಪಾದನ ರೀತಿಯನ್ನೂ ವಿಷಯಗಳನ್ನೂ ಒಳಗೊಂಡಿರುವುದು ಈ ಕೃತಿಯ ವೈಶಿಷ್ಟ್ಯ.
ಕನ್ನಡ ಛಂದಸ್ಸಿನ ಗಣಸ್ವರೂಪವನ್ನು ಪ್ರಸಿದ್ಧವಾದ ಪದ್ಯಜಾತಿಗಳನ್ನೂ ಕೆಲವು ಸಂಸ್ಕೃತ ಲಕ್ಷಣ ಗ್ರಂಥಗಳಲ್ಲಿ ಕೂಡ ಪ್ರಾಸಂಗಿಕವಾಗಿ ವಿವೇಚಿಸಿರುವುದು ಕಂಡುಬರುತ್ತದೆ. ಜಯಕೀರ್ತಿಯ (ಸು. 1050) ಛಂದೋನುಶಾಸನಮ್ ಎಂಬ ಗ್ರಂಥದಲ್ಲಿ ಅಲ್ಲಲ್ಲಿ ಕನ್ನಡ ಛಂದಸ್ಸಿನ ಸಂಗತಿಗಳು ಕ್ವಚಿತ್ತಾಗಿ ಉಕ್ತವಾಗಿರುವುದಲ್ಲದೆ, ಕರ್ಣಾಟಕ ವಿಷಯಭಾಷಾಜಾತ್ಯಧಿಕಾರವೆಂಬ 6ನೆಯ ಅಧಿಕಾರದಲ್ಲಿ ಪುರ್ತಿಯಾಗಿ ಕನ್ನಡ ಛಂದಸ್ಸಿನ ವಿವೇಚನೆ ಲಕ್ಷಣ-ಲಕ್ಷ್ಯ ಸಮನ್ವಿತವಾಗಿ ಬಂದಿದೆ. ಈ ಗ್ರಂಥದಲ್ಲಿ ನಾಗವರ್ಮನ ಛಂದೋಂಬುಧಿಯ ಪ್ರಭಾವವನ್ನು ಕಾಣಬಹುದಾಗಿದೆ.
ಉಪಾಸಂಹಾರ:
ಕನ್ನಡ ಕಾವ್ಯದಲ್ಲಿ ಬಳಸುವ ಮೀಟರ್‌ಗಳ ಅಧ್ಯಯನ, ಕನ್ನಡ ಪ್ರೋಸೋಡಿ, ಒಂದು ಪದ್ಯದ ಲಯಬದ್ಧ ರಚನೆಯನ್ನು ವಿವರಿಸುತ್ತದೆ. ಬಳಸಿದ ಮೀಟರ್‌ಗಳಲ್ಲಿ ಇತರ ಸಂಪ್ರದಾಯಗಳಿಂದ ಎರವಲು ಪಡೆದ ಕೆಲವು ಮೀಟರ್‌ಗಳು ಮತ್ತು ಸ್ಥಳೀಯ ಮೀಟರ್‌ಗಳು ಸೇರಿವೆ. ಕನ್ನಡ ಸಾಹಿತ್ಯ, ಅದರಲ್ಲೂ ಹಳೆಯ ಕನ್ನಡ ಕಾವ್ಯಗಳು ಮೀಟರ್ ಮೇಲೆ ಇರಿಸಿದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ.