"ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು" ನಾಲ್ಕು ಪುಟಗಳಿಗೆ ಗದೆ
Answers
"ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು"
ಈ ಗಾದೆ ಯಾವ ಶತಮಾನದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹುಟ್ಟಿರಬಹುದು? ಈ ಗಾದೆ ಅಂದಿನ ದಿನದಲ್ಲಿ ಬಳಕೆಗೆ ಬಂದಿದೆಯೆಂದರೆ, ಅಂದೂ ಸಮಾಜದಲ್ಲಿ ತನ್ನದೇ ಆದ ಒತ್ತಡಗಳು ಇದ್ದವು ಅಂದಾಯಿತು ಅಲ್ಲವೇ? ಇವತ್ತಿನ ದಿನದ ಮಾತು ಬಿಡಿ; ಇಂದು ಜೀವನ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಇದ್ದಹಾಗೆ ವಿರಮಿಸುವಂತಿಲ್ಲ. ಗೆದ್ದೆವು ಎಂದು ಕೊನೆಯ ಚಂಡಿನ ತನಕ ಬೀಗುವಂತಿಲ್ಲ. ಈ ಗಾದೆ ಮಾತು ಕೂಡ ಹೆಚ್ಚು ಕಡಿಮೆ ಇದನ್ನೇ ಹೇಳುತ್ತದೆ. ಯಶಸ್ಸು ಮತ್ತು ಹಣ ಎಷ್ಟೇ ಗಳಿಸಿರಲಿ, ಗಳಿಸಿದೆವು ಎಂದು ಮೈ ಮರೆತು ಕೂರುವಂತಿಲ್ಲ. ಹಾಗೆ ಕೂತ ಮರು ಗಳಿಗೆ ಅದು ಬೇರೆ ಯಾರದ್ದೋ ಪಾಲಾಗಿರುತ್ತದೆ.
ನೇರಾನೇರ ಗಾದೆಯ ಮಾತಿನ ಅರ್ಥ, ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ತಾನು ಮಾಡುವ ಕಾಯಕವನ್ನು ಮಾತ್ರ ಮುಂದುವರಿಸುತ್ತಲೇ ಇರಬೇಕು. ನನಗೇನು, ಹಣವಿದೆ ಎಂದು ತನ್ನ ಕಾಯಕದಲ್ಲಿ ಅಸಡ್ಡೆ ಅಥವಾ ಕಾಯಕವನ್ನ ಮುಂದುವರಿಸದಿದ್ದರೆ ಆತ ಎಷ್ಟೇ ಹಣವಂತನಾಗಿರಲಿ ಒಂದಲ್ಲ ಒಂದು ದಿನ ಬಡವನಾಗುತ್ತಾನೆ. ಎಷ್ಟೇ ಹಣವಿದ್ದರೂ ಅದನ್ನ ಮರು ತುಂಬದೆ ಬರಿಯ ಖರ್ಚು ಮಾಡುತ್ತಾ ಹೋದರೆ ಅದು ಖಾಲಿಯಾಗಲೇಬೇಕಲ್ಲವೇ? ಇದನ್ನರಿತ ನಮ್ಮ ಪೂರ್ವಜರು ಎಚ್ಚರಿಕೆಯ ರೂಪದಲ್ಲಿ ‘ಕೂತು ತಿಂದರೆ ಕುಡಿಕೆ ಹೊನ್ನು ಸಾಲದು’ ಎಂದರು. ನಾವು ನಿರಂತರ ಕಾರ್ಯಯೋಗಿಯಾಗಿರಬೇಕು. ಬದುಕಿನಲ್ಲಿ ಆಯಾ ಸಮಯಕ್ಕೆ ತಕ್ಕಂತೆ ನಾವು ಪ್ರಸ್ತುತರಾಗಿರಬೇಕು. ಇಲ್ಲವೆಂದರೆ ಏನೂ ಇಲ್ಲ.
ಇದನ್ನ ಸ್ಪಾನಿಷರು ‘el hombre pobre, la cama lo mata’ (ಎಲ್ ಹೊಂಬ್ರೆ ಪೊಬ್ರೆ ಲ ಕಾಮ ಲೊ ಮಾತ) ಎನ್ನುತ್ತಾರೆ. ಅಂದರೆ ಹಾಸಿಗೆ ಮನುಷ್ಯನನ್ನ ಬಡವನನ್ನಾಗಿ ಮಾಡುತ್ತದೆ ಮತ್ತು ಕೊನೆಗೆ ಅವನನ್ನ ಕೊಲ್ಲುತ್ತದೆ ಎನ್ನುವ ಅರ್ಥ. ಮನುಷ್ಯ ಸಮಾಜಮುಖಿಯಾಗಿ ಹತ್ತಾರು ಜನಕ್ಕೆ ಉಪಯೋಗವಾಗುವಂತ ಕೆಲಸ ಮಾಡುತ್ತಾ ಇದ್ದರೆ, ಬದುಕು ಹಸನಾಗಿರುತ್ತದೆ. ಹೋಗಲಿ ಕೊನೆಯ ಪಕ್ಷ ತನ್ನ ಒಳಿತಿಗಾಗಿಯಾದರು ಸರಿಯೇ ಆತ ದುಡಿಯುತ್ತಿರಬೇಕು. ಕೆಲಸ ಮಾಡದೆ ಸೋಮಾರಿಯಾಗಿ ಹೆಚ್ಚಿನ ವಿಶ್ರಾಂತಿ ತೆಗೆದುಕೊಂಡರೆ ಅದು ಮನುಷ್ಯನ್ನ ಬಡವನನ್ನಾಗಿ ಮಾಡುತ್ತದೆ. ದೇಹದಲ್ಲಿ ರೋಗರುಜಿನಗಳು ಮನೆ ಮಾಡುತ್ತವೆ. ಕೊನೆಗೆ ಆತನ ಅಂತ್ಯ ಕೂಡ ಆಗುತ್ತದೆ. ಮನುಷ್ಯ ಎಷ್ಟೇ ಬುದ್ಧಿವಂತನಿರಲಿ ಅಥವಾ ಹಣವಂತನಿರಲಿ ಏನೂ ಮಾಡದೆ ನೇಪಥ್ಯಕ್ಕೆ ಸರಿದನೆಂದರೆ ಆತನಿಗೆ ಬೆಲೆಯಿಲ್ಲ ಎನ್ನುವುದನ್ನ ಸೂಕ್ಶ್ಮವಾಗಿ ಇಲ್ಲಿ ಹೇಳಿದ್ದಾರೆ.
ಇಂಗ್ಲಿಷರು ಇದನ್ನು ಹೇಳಿದ ಧಾಟಿ ಬೇರೆಯದಿದೆ. ಅವರು ‘A fool and his money are soon parted’ ಎನ್ನುತ್ತಾರೆ. ಅಂದರೆ ನನ್ನ ಬಳಿ ಸಾಕಷ್ಟಿದೆ ಎಂದು ಸುಮ್ಮನೆ ಕೂರುವನು ಹುಚ್ಚ, ಬದುಕು ನಿರಂತರ ಹರಿಯುವ ನೀರಾಗಿರಬೇಕು. ನಿಂತ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪನ್ನವಾಗುತ್ತವೆ. ಹೀಗಾಗಿ ಹುಚ್ಚನಿಂದ ಹಣ ಬೇಗ ಬೇರ್ಪಡುತ್ತದೆ ಎಂದರು. ಉಪಮೆಗಳು, ಪ್ರತಿಮೆಗಳ ಬಳಕೆ ಹೇಗಾದರೂ, ಯಾವುದಾದರೂ ಇರಲಿ ಅವುಗಳೆಲ್ಲ ಸಾರುವ ಸಂದೇಶ ಮಾತ್ರ ಒಂದೇ. ಇದೆಯೆಂದು, ಸಾಧಿಸಿದೆವೆಂದು ಕೂರುವಂತಿಲ್ಲ. ಬದುಕಿನ ಓಟ ಮತ್ತು ವೇಗ ಎರಡೂ ಲಯದಲ್ಲಿರಬೇಕು ಎನ್ನುವುದು ಆ ಸಂದೇಶ.