ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
Answers
ಇದೊಂದು ಅತ್ಯಂತ ಖ್ಯಾತಿಯನ್ನು ಪಡೆದಿರುವ ಗಾದೆಮಾತು. ಪ್ರತಿಯೊಂದು ಗಾದೆಗೂ ವಾಚ್ಯಾರ್ಥ ಹಾಗೂ ಗೂಡಾರ್ಥ ಇದೆ. ವಾfಯಾರ್ಥವೆಂದರೆ ಗಾದೆಯನ್ನು ಓದಿದಾಗ ತಿಳಿಯುವ ಅರ್ಥ ಹಾಗೂ ಗೂಡಾರ್ಥವೆಂದರೆ ಅದರೊಳಗಿನ ಸಾರವೆಂದು ಹೇಳಬಹುದು. ಈ ಗಾದೆಯನ್ನು ಓದಿದ ತಕ್ಷಣ ತಿಳಿಯುವುದೇನೆಂದರೆ ಕುಂಬಾರನಿಗೆ ಮಡಕೆಯನ್ನು ಮಾಡಲು ಸಾಕಷ್ಟು ಸಮಯ ಬೇಕು. ಆದರೆ ಅದೇ ಒಂದು ದೊಣ್ಣೆಯು ಕೇವಲ ಒಂದು ನಿಮಿಷದಲ್ಲಿ ಅದನ್ನು ಒಡೆದು ಬುಡುತ್ತದೆ. ಈ ಗಾದೆಯ ಗೂಡಾರ್ಥವೆಂದರೆ ಜನರ ಮನದಲ್ಲಿ ವಿಶ್ವಾಸವನ್ನು ಗಳಿಸಲು ಅಥವಾ ಏನಾದರೂ ಸಂಪಾದಿಸಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಒಬ್ಬರ ವಿಶ್ವಾಸ ಮುರಿಯಲು ಯಾವುದಾದರೂ ಒಂದು ಘಟನೆ ಸಾಕು. ಅಂದರೆ ಒಬ್ಬರ ದ್ರಷ್ಟಿಯ ಮುಂದೆ ಮೇಲೇರಲು ಬಹಳಷ್ಟು ಕಷ್ಟವಾಗುತ್ತದೆ. ಆದರೆ ಅವರ ದ್ರಷ್ಟಿಯ ಮುಂದೆ ಕೆಳ ಬೀಳಲು ಕೆಲ ಕ್ಷಣಗಳು ಸಾಕು. ಉದಾಹರಣೆಗೆ ಒಬ್ಬ ಹುಡುಗನಿದ್ದ ಆತನ ಹೆಸರು ಸಚಿನ್. ಆತನು ಉತ್ತಮ ಚಿತ್ರಗಾರನಾಗಿದ್ದ. ಇಡೀ ಶಾಲೆಯಲ್ಲಿ ಆತನ ಚಿತ್ರಗಳ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಹೀಗಿರಲು ಒಂದು ದಿನ ಅವನು ರೋಹಿತ್ ನ ಬಳಿ ಬಣ್ಣದ ಪೆನ್ಸಿಲುಗಳನ್ನು ನೋಡಿದ. ಅದು ತನ್ನ ಬಳಿ ಇದ್ದರೆ ಚೆನ್ನಾಗಿ ಚಿತ್ರ ಬಿಡಿಸಬಹುದು ಎಂದು ಆಲೋಚಿಸಿ ಅವನ ಬಳಿ ಇದ್ದ ಬಣ್ಣದ ಪೆನನ್ಸಿಲುಗಳನ್ನು ಕದಿಯುತ್ತಾನೆ ಹಾಗೂ ಈ ವಿಷಯ ಎಲ್ಲರಿಗೂ ತಿಳಿಯುತ್ತದೆ. ಅಧ್ಯಾಪಕರು ಅವನಿಗೆ ಶಿಕ್ಷೆಯನ್ನು ಕೊಡುತ್ತಾರೆ. ಸಚಿನ್ ತಂದೆಯ ಬಳಿ ಬಂದು ನಡೆದ ವಿಷಯವನ್ನು ಹೇಳುತ್ತಾನೆ. ಆಗ ತಂದೆಯು ಆತನ ಬಳಿ ನಿನ್ನ ಬಳಿಯಿರುವ ಉತ್ತಮವಾದ ಚಿತ್ರವನ್ನು ತರಲು ಹೇಳುತ್ತಾರೆ ಹಾಗೂ ಸಚಿನ್ ಅದನ್ನು ತಂದ ಬಳಿಕ ಆ ಸುಂದರವಾದ ಚಿತ್ರದ ಮೇಲೆ ಕಪ್ಪಿನ ಚುಕ್ಕೆಯನ್ನು ಹಾಕುತ್ತಾರೆ. ಆಗ ಮಗನು ಯಾಕೆ ಈ ರೀತಿಯಾಗಿ ಮಾಡಿದ್ದೀರಿ ಎಂದು ಕೇಳಲು ನಿನಗೆ ಈ ಇಡೀ ಚಿತ್ರ ಬಿಡಿಸಲು ಎಷ್ಟೊಂದು ಸಮಯ ಬೇಕಾಯಿತು. ಆದರೆ ನೀನು ಮಾಡಿದ ಒಂದು ಕಳ್ಳತನ ನಿನ್ನ ಜೀವನದಲ್ಲಿ ಇದೇ ರೀತಿ ಕಪ್ಪು ಚುಕ್ಕೆಯಾಗಿದೆ. ಕುಂಬಾಅರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಮಾತಿದೆ. ಅದೇ ರೀತಿ ನಿನ್ನ ಖ್ಯಾತಿಯು ಕಳ್ಳತನದಿಂದಾಗಿ ಮಸುಕಾಗಿ ಹೋಯಿತು ಎಂದಾಗ ಮಗನಿಗೆ ತನ್ನ ತಪ್ಪಿನ ಮನವರಿಕೆಯಾಯಿತು
Explanation:
ಗಾದೆಯು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದ್ದು, ಜನಸಾಮಾನ್ಯರ ಜೀವನ ಹಾಗೂ ಭಾಷೆಯಲ್ಲಿ ಹಾಸು ಹೊಕ್ಕಾಗಿ ವ್ಯಾಪಕವಾಗಿದೆ. ಆಡುಮಾತಿನ ಜೀವಸತ್ವಗಳೇ ಆಗಿವೆ ಎಂದರೆ ತಪ್ಪಾಗಲಾರದು. ಊಟಕ್ಕೆ ಉಪ್ಪಿನಕಾಯಿಯಂತೆ ಮಾತಿಗೆ ಗಾದೆಗಳು ವ್ಯಂಜನಶಕ್ತಿಯನ್ನು ಒದಗಿಸುತ್ತವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾದೆಗಳು ಗಾತ್ರದಲ್ಲಿ ಬಿಂದುವಿನಂತಿದ್ದರೂ ಅರ್ಥದಲ್ಲಿ ಸಿಂಧುವೇ ಎನಿಸಿವೆ.
‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ’ ಎಂಬ ಗಾದೆ ದಿನ ನಿತ್ಯದ ಮಾತಿನಲ್ಲಿ ಹೆಚ್ಚು ಬಳಕೆಯಲ್ಲಿದೆ. ಯಾವುದೇ ವಸ್ತುವನ್ನು ತಯಾರಿಸಲು ಸಿದ್ಧತೆ ಬೇಕು. ಪರಿಶ್ರಮ ಬೇಕು, ಕಾಲಾವಕಾಶವೂ ಬೇಕು. ಈ ಗಾದೆಯ ಹಿಂದೆ ಸಂಭವಿಸಿರಬಹುದಾದ ಘಟನೆಯನ್ನು ನಾವು ಸುಲಭವಾಗಿ ಊಹಿಸ ಬಹುದಾಗಿದೆ. ಕುಂಬಾರನೊಬ್ಬ ಹಲವಾರುದಿನಗಳ ಸಿದ್ಧತೆಗಳನ್ನು ಮಾಡಿಕೊಂಡು, ಬೆವರು ಸುರಿಸಿ ಮಡಕೆಗಳನ್ನು ತಯಾರಿಸುತ್ತಾನೆ. ಹೀಗೆ ಪರಿಶ್ರಮದಿಂದ ತಯಾರಿಸಿದ ಮಡಕೆಯನ್ನು ಸುಲಭವಾಗಿ ಒಡೆದು ಹಾಕಿ ಬಿಡುಹುದು. ದೊಣ್ಣೆಯನ್ನು ಬೀಸಿ ನಿಮಿಷ ಮಾತ್ರದಲ್ಲಿ ನಾಶಮಾಡಿದ ಅನಾಹುತ ಘಟನೆಯನ್ನು ಕಣ್ಣಾರೆಕಂಡ ಚಿಂತಕನೊಬ್ಬನು ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂದು ಉದ್ಗರಿಸಿರಬೇಕು. ಸ್ವಾನುಭವದಿಂದ ಪ್ರಜ್ಞಾವಂತ ಜಾಣನೊಬ್ಬನು ಸಾರ್ವಜನಿಕ ಸತ್ಯದ ಈ ನಿಪುಣನುಡಿಯನ್ನು ಸೆರೆಹಿಡಿಯುವ ಸಾಹಸ ಮಾಡಿದ್ದಾನೆಂದರೆ ತಪ್ಪಾಗಲಾರದು. ಮನಮುಟ್ಟುವ, ಮನಮಿಡಿಯುವ ವಾಸ್ತವಿಕಕ್ಕೆ ಸನಿಹವಾದ ಈ ನುಡಿ ಸೃಷ್ಟಿಯಾದ ಕ್ಷಣದಿಂದ ಇಂದಿನವರೆಗೂ ಜನರ ಬಾಯಲ್ಲಿ ಅವಿರತವಾಗಿ ಹರಿದು ಬಂದು ಪ್ರತಿನಿತ್ಯ ಪ್ರತಿಕ್ಷಣವೂ ಸತ್ಯ ದರ್ಶನವನ್ನು ಮಾಡಿಸುತ್ತಿದೆ.
ಒಳ್ಳೆಯದನ್ನು ಮಾಡುವುದು ಕಷ್ಟ. ಕೆಟ್ಟದ್ದನ್ನು ಮಾಡುವುದು, ಹಾಳುಮಾಡುವುದು ಸುಲಭ. ಯಾವುದೇ ಒಂದನ್ನು ಸೃಷ್ಟಿ ಮಾಡುವುದು ಕಷ್ಟಮಾತ್ರವಲ್ಲ, ಸಾಕಷ್ಟು ಸಮಯಾವಕಾಶ ಬೇಕು. ನಾಶ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬ ವಿಚಾರವನ್ನು ಈ ಗಾದೆ ಸ್ಪಷ್ಟಪಡಿಸುತ್ತದೆ.
ಬ್ರಹ್ಮನ ಹಲವಾರು ದಿನಗಳ, ತಿಂಗಳ, ವರ್ಷಗಳ ಸೃಷ್ಟಿಯನ್ನು ಕಾಲದೇವ ನಿಮಿಷಮಾತ್ರದಲ್ಲಿ ನೊಣೆದು ನುಂಗಿ ತೇಗಿಬಿಡುತ್ತಾನೆ. ತಾಯಿಯ ಗರ್ಭದಲ್ಲಿ ಅಂಕುರಿಸಿದ ಭ್ರೂಣ ಪೂರ್ಣ ಮಗುವಿನ ರೂಪದಲ್ಲಿ ಜನ್ಮತಳೆಯಲು ಒಂಬತ್ತು ತಿಂಗಳು ಬೇಕಾಗುತ್ತದೆ. ಬೆಳೆದು ದೊಡ್ಡವರಾಗಲು ಅನೇಕ ಹಂತಗಳನ್ನು ದಾಟಬೇಕಾಗುತ್ತದೆ. ವರ್ಷ ವರ್ಷಗಳನ್ನು ಕಳೆಯ ಬೇಕಾಗುತ್ತದೆ. ತಿಳಿಗೇಡಿಗಳು, ಕೊಲೆಗಡುಕರು, ಭಯೋತ್ಪಾದಕರು ಕ್ಷಣಮಾತ್ರದಲ್ಲಿ ಜೀವವನ್ನು ತೆಗೆದುಬಿಡುತ್ತಾರೆ.
ಪ್ರಾಕೃತಿಕ ಸಂಪತ್ತುಗಳು ರೂಪುಗೊಂಡು ಸಮೃದ್ಧವಾಗಿ ಬೆಳೆಯಲು ಕೋಟ್ಯಂತರ ವರ್ಷಗಳೇ ಬೇಕು. ಇಂತಹ ಪ್ರಕೃತಿ ಸಂಪನ್ಮೂಲಗಳನ್ನು ಮನುಷ್ಯ ತನ್ನ ದುರಾಸೆಯಿಂದ ಕೆಲವೇ ವರ್ಷಗಳಲ್ಲಿ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದಾನೆ. ಒಕ್ಕಲು ಮಾಡಲು, ಹೊಲ, ಗದ್ದೆ, ತೋಟವನ್ನು ಅಭಿವೃದ್ಧಿಗೊಳಿಸಲು ಹಾಗೂ ಮನೆ, ಮಠ, ಸಂಸ್ಥೆ ಮುಂತಾದವನ್ನು ಕಟ್ಟಿ ಬೆಳೆಸಲು ಹೆಚ್ಚಿನ ಪರಿಶ್ರಮ ಬೇಕು, ಕಾಲಾವಕಾಶವೂ ಬೇಕೇ ಬೇಕು. ನಾಶಮಾಡಲು ಹೆಚ್ಚಿನ ಸಮಯ ಬೇಕಿಲ್ಲ. ಪ್ರವಾಹ, ಬರಗಾಲ, ಭೂಕಂಪ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ಅಂತೆಯೇ ಮದ, ಮತ್ಸರ, ಮೋಹ, ಕಾಮ, ಕ್ರೋದ ಮುಂತಾದ ದುರ್ಗುಣಗಳು ಕ್ಷಣಮಾತ್ರದಲ್ಲಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆ ಮಾಡಿಬಿಡುತ್ತವೆ.
‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ' ಎಂಬ ಗಾದೆಯಲ್ಲಿ ನಾಲ್ಕೇ ನಾಲ್ಕು ಪದಗಳಿದ್ದರೂ ಧ್ವನಿಯಲ್ಲಿ ಅಣಕವಿದೆ. ಮೊದಲೆರಡು ಪದಗಳು ನಿರ್ಮಾಣದ ಬಗೆಗೆ ಹೇಳಿದರೆ. ಕೊನೆಯೆರಡು ಪದಗಳು ವಿನಾಶದ ಬಗೆಗೆ ಹೇಳುತ್ತವೆ.
ಚಿಕ್ಕದಾಗಿ, ಚೊಕ್ಕವಾಗಿ ಹೇಳ ಬೇಕಾದರೆ ಸೂಚ್ಯವಾಗಿ ತಿಳಿಸಬೇಕಾದುದನ್ನು ಸೂಚಿಸಲು ಇಂತಹ ರೂಪಕಗಳನ್ನು ಬಳಸುತ್ತೇವೆ. ಕುಂಬಾರಿಕೆಯ ಕ್ರಿಯಾಶಕ್ತಿ ಮತ್ತು ದೊಣ್ಣೆಯ ವಿನಾಶಕಾರಕ ರೂಪಕ ಈ ಗಾದೆಯ ಸ್ವಾರಸ್ಯವಾಗಿದೆ.