information about gooseberry in kannada
Answers
ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ, ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ.ದೀಪಾವಳಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದಂಡಿದಂಡಿಯಾಗಿರುವ ಕಾಣಸಿಗುವ ಹಸಿರು ಬಣ್ಣದ ದುಂಡಗಿನ ಬೆಟ್ಟದ ನೆಲ್ಲಿಕಾಯಿಗಳು ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು ಆಚರಿಸಲಾಗುವ ಪವಿತ್ರ ತುಳಸಿ ಲಗ್ನದ ಅವಿಭಾಜ್ಯ ಅಂಗ. ಈ ದಿನದಂದು ತುಳಸಿಯನ್ನು ಶ್ರೀಕೃಷ್ಣ ಮದುವೆಯಾದ ಎಂದು ನಂಬುತ್ತಾರೆ. ತುಳಸಿ ಗಿಡದ ಜೊತೆ ಬೆಟ್ಟದ ನೆಲ್ಲಿಕಾಯಿ ಟೊಂಗೆಯನ್ನು ಇಟ್ಟು ಹೆಂಗಳೆಯರು ಪೂಜಿಸುತ್ತಾರೆ. ಬೆಟ್ಟದ ನೆಲ್ಲಿಕಾಯಿ ತುದಿ ಕತ್ತರಿಸಿ ತುಳಸಿಗೆ ಆರತಿ ಬೆಳಗುತ್ತಾರೆ. ನಂತರ ದ್ವಾದಶಿಯ ಭರ್ಜರಿ ಊಟವಂತೂ ಇದ್ದೇ ಇರುತ್ತದೆ.
ತಳ್ಳುಗಾಡಿಯ ಮೇಲೆ ಬರುವ ನೆಲ್ಲಿಕಾಯಿಗೆ ಈ ಬಾರಿ ಭಾರೀ ಬೇಡಿಕೆ. ಎರಡು ವರ್ಷಗಳ ಹಿಂದೆ 40ರಿಂದ 60 ರು.ಗೆ ಕೆಜಿ ತೂಗುತ್ತಿದ್ದ ಬೆಟ್ಟದ ನೆಲ್ಲಿಕಾಯಿ ಈ ವರ್ಷ ಕೆಜಿಗೆ 80ರಿಂದ 100 ರು. ಬೀಗುತ್ತಿದೆ. ಕೆಜಿಗೆ ಹತ್ತು ರು. ಕಡಿಮೆ ಮಾಡಿ ಅಂದ್ರೆ ಮಾರಾಟಗಾರರು ಒಂದು ರುಪಾಯಿನೂ ಕಡಿಮೆ ಮಾಡಲ್ಲ, ಬೇಕಿದ್ರೆ ತಗೊಳ್ಳಿ ಇಲ್ಲದಿದ್ರೆ ಬಿಟ್ಟಾಕಿ, ಅಂತ ಥಟ್ಟನೆ ಮುಖಕ್ಕೆ ಬಾರಿಸುತ್ತಾರೆ. ಗತ್ಯಂತರವಿಲ್ಲ ಅಂತ ಕಾಲು ಕೆಜಿ ಕೊಡಪ್ಪ ಸಾಕು ಅಂತರ ಗ್ರಾಹಕರು ಇಪ್ಪತ್ತು ರು. ತೆಗೆಯುತ್ತಾರೆ. ಇಷ್ಟಾಗಿಯೂ ಬೇಕಾದ ಕಾಯಿಗಳನ್ನು ಆರಿಸಿಕೊಳ್ಳಲು ಕೈಹಾಕಿ ವ್ಯಾಪಾರಿ ಗುರ್ ಅಂದಿರುತ್ತಾನೆ.ನೆಲ್ಲಿಕಾಯಿ ತಲೆಗೆ ಹಚ್ಚಿಕೊಂಡರೆ ಹೊಟ್ಟು ಹೋಗುತ್ತದೆ, ಹೇನು ನಿವಾರಣೆಯಾಗುತ್ತದೆ, ಕೂದಲು ಚೆನ್ನಾಗಿ ಬೆಳೆಯುತ್ತವೆ, ಕಚ್ಚಿ ತಿಂದರೆ ಗ್ಯಾಸ್, ಹುಳಗಳು ನಾಶವಾಗುತ್ತವೆ, ಜ್ಯೂಸ್ ಮಾಡಿ ಕುಡಿದರೆ ಅಸ್ತಮಾ ಕಡಿಮೆಯಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದು ವಾತ, ಪಿತ್ತ, ಕಫ ಮೂರು ದೋಷಗಳನ್ನು ನಿವಾರಿಸಿ ದೇಹವನ್ನು ರೋಗಮುಕ್ತವನ್ನಾಗಿ ಮಾಡುತ್ತದೆ ಇತ್ಯಾದಿ ಇತ್ಯಾದಿ. ಬೆಟ್ಟದ ನೆಲ್ಲಿಕಾಯಿ ಬೆಟ್ಟದಷ್ಟು ಆರೋಗ್ಯ ಗುಣಗಳನ್ನು ಹೊಂದಿದೆ.ಅದೆಲ್ಲ ಸರಿ, ಒಗರು ಬೆಟ್ಟದ ನೆಲ್ಲಿಕಾಯಿ ತಿಂದು ನೀರು ಕುಡಿದಿದ್ದೀರಾ? ಒಂದ್ ಕಿತಾ ಕುಡಿದು ನೋಡಿ. ಅಮೃತಕ್ಕೆ ಸಮಾನವಾದ ರುಚಿಯ ಸ್ವಾದವನ್ನು ಅನುಭವಿಸದಿದ್ದರೆ ಕೇಳಿ. ಸಣ್ಣದಾಗಿ ಹೆಚ್ಚಿ ಉಪ್ಪು, ಮೊಸರು, ಇಂಗಿನ ಮಿಶ್ರಣದಲ್ಲಿ ಅದ್ದಿ ಬಿಸಿಲಲ್ಲಿ ಒಣಗಿಸಲು ಇಟ್ಟ ಹಸಿ ನೆಲ್ಲಿಕಾಯಿಯನ್ನು ತಿಂದಿದ್ದೀರಾ? ತಿಂದು ನೋಡಿ. ಉಪ್ಪು, ಹುಳಿಯ ನೆಲ್ಲಿಕಾಯಿಯನ್ನು ಚಪ್ಪರಿಸಿ ತಿನ್ನುತ್ತಿದ್ದರೆ ಬಾಯಿಯಲ್ಲಿ ಲಾಲಾರಸ ಜಲಪಾತವಾಗಿರುತ್ತದೆ, ಇನ್ನಷ್ಟು ತಿನ್ನಬೇಕೆಂಬ ಬಯಕೆ ಉತ್ಪತ್ತಿಯಾಗಿರುತ್ತದೆ. ಇದೇ ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ.
ಸಣ್ಣದಾಗಿ ಹೆಚ್ಚಿ, ಉಪ್ಪು ಇಂಗು ಮಿಶ್ರಿತ ಮೊಸರಿನಲ್ಲಿ ಅದ್ದಿ, ತಾರಸಿಯ ಮೇಲೆ ಒಣಗಲು ಇಟ್ಟ ನೆಲ್ಲಿಕಾಯಿ ಒಣಗಿ ಬರುವುದರ ಒಳಗೆ ಅರ್ಧಕ್ಕರ್ಧ ಖಾಲಿಯಾಗಿರುತ್ತವೆ. ಒಂದು ಬಾಯಲ್ಲಿ ಇಳಿದು, ಇನ್ನೊಂದನ್ನು ಬಾಯಿಗೆ ಎಸೆದುಕೊಳ್ಳದಿದ್ದರೆ ತೃಪ್ತಿ ಇರುವುದಿಲ್ಲ. ಅಷ್ಟರಲ್ಲಿ ಮೂರನೆಯ ತುಣುಕಿನ ಮೇಲೆ ಕಣ್ಣುಬಿದ್ದಿರುತ್ತದೆ. ಕಚೇರಿಗೆ ಹೋಗುವಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಅಥವಾ ನ್ಯೂಸ್ ಪೇರಸಿನ ತುಂಡಿನಲ್ಲಿ ಹಸಿಹಸಿ ಮೊಸರು ನೆಲ್ಲಿಕಾಯಿ ತುಂಡುಗಳನ್ನು ಸುತ್ತಿಕೊಂಡು ಬಂದು ಊಟವಾದ ನಂತರ ಕದ್ದುಮುಚ್ಚಿ ಬಾಯಲ್ಲಿ ಹಾಕಿಕೊಳ್ಳಿ. ಅಪ್ಪಿತಪ್ಪಿ ಕೂಡ ಅಕ್ಕಪಕ್ಕದವರಿಗೆ ಅದನ್ನು ತೋರಿಸಬೇಡಿ. ಯಾಕೆ ಅಂತ ಮಾತ್ರ ಕೇಳಬೇಡಿ?
ಉಲ್ಲಾಸ ತುಂಬ ನೆಲ್ಲಿ : ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಔಷಧಿಗಾಗಿ ಧಾರಾಳವಾಗಿ ಬಳಸುತ್ತಾರೆ. ಪತಂಜಲಿ ಆಯುರ್ವೇದದ ಪ್ರಕಾರ, ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ನೆಲ್ಲಿ ರಸವನ್ನು ಕುಡಿದರೆ ಗ್ಯಾಸ್ ತೊಂದರೆ, ಅಜೀರ್ಣತೆ ನಿವಾರಣೆಯಾಗುತ್ತದೆ. ಅದು ಬೆಳಗಿನ ಜಾವ ದೇಹದಲ್ಲಿ ವಿಶಿಷ್ಟ ಉಲ್ಲಾಸವನ್ನು ತುಂಬುತ್ತದೆ. ರಾತ್ರಿ ಊಟವಾದ ಮೇಲೆ ಕೂಡ ನೆಲ್ಲಿಕಾಯಿ ರಸವನ್ನು ಹೀರಬಹುದು ಅಥವಾ ಒಣಗಿಸಿಟ್ಟ ನೆಲ್ಲಿಕಾಯಿ ತುಂಡನ್ನು ಹಾಕಿಕೊಂಡು ಮಲಗಬಹುದು.
ಇನ್ನು ಬೆಟ್ಟದ ನೆಲ್ಲಿಕಾಯಿಯ ಉತ್ಪನ್ನಗಳಿಗಂತೂ ಲೆಕ್ಕವೇ ಇಲ್ಲ. ನೆಲ್ಲಿಕಾಯಿಯನ್ನು ದುಂಡಗೆ ಉಪ್ಪಿನಕಾಯಿ ಹಾಕಿ ಇಡೀ ವರ್ಷ ಬಳಸಬಹುದು. ಇನ್ನು ಹಬ್ಬದ ಸಂದರ್ಭದಲ್ಲಿ ನೆಲ್ಲಿಕಾಯಿ ಹುಳಿಯ ಜೊತೆಗೆ ನೆಲ್ಲಿಕಾಯಿ ಗೊಜ್ಜು ಬಲು ಪಸಂದಾಗಿರುತ್ತದೆ. ಇದನ್ನು ರುಬ್ಬಿ ಚಟ್ನಿ ಕೂಡ ಮಾಡುತ್ತಾರೆ. ನೆಲ್ಲಿಕಾಯಿ ಶರಬತ್ತು ದ್ರಾವಣವನ್ನು ತಯಾರಿಸಿ, ಫ್ರಿಜ್ಜಿನಲ್ಲಿಟ್ಟು ಆಗಾಗ ಜ್ಯೂಸ್ ಮಾಡುತ್ತ ಹೀರುತ್ತಿರಬಹುದು. ನೆಲ್ಲಿಕಾಯಿ ಜಾಮ್ ತಯಾರಿಸಿ ಚಪಾತಿಯೊಡನೆ ಮೆಲ್ಲುತ್ತಾರೆ. ನೆಲ್ಲಿಕಾಯಿ ಹೋಳಿಗೆಯನ್ನು ಕೂಡ ಮಾಡುವ ವಿಧಾನಗಳಿವೆ.
ಈ ಚಿತ್ರದಲ್ಲಿ ಕಾಣುವ ಮತ್ತೊಂದು ಪದಾರ್ಥ ಮಾವು ಶುಂಠಿ. ಹಸಿ ಶುಂಠಿಯಂತೆ ಕಾಣುವ ಇದು ಶುಂಠಿಯಲ್ಲ. ಶುಂಠಿಯಂತೆ ಖಾರವೂ ಇರುವುದಿಲ್ಲ. ಫೈಬರ್ ಅಂಶವನ್ನು ಹೊಂದಿರುವ ಇದು ಕೂಡ ಆರೋಗ್ಯಕ್ಕೆ ಲಾಭಕರ ಖಾದ್ಯ. ಇದರ ಚಟ್ನಿ ಅಥವಾ ಉಪ್ಪಿನಕಾಯಿ ಮಾಡಿ ಆಗಾಗ ಬಳಸುತ್ತಿರಬಹುದು. ಇದಕ್ಕೆ ಮಾವಿನಕಾಯಿಯ ಪರಿಮಳ ಇರುವುದರಿಂದ ಮಾವು ಶುಂಠಿ ಅಂತ ಕರೆಯುತ್ತಾರೆ