parisara samrakshane easy kannada
Answers
Answer:
ಪರಿಸರ ಮಾಲಿನ್ಯ
ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛ ವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ.
ಇವೆಲ್ಲವುಗಳಿಗೂ ಮುಖ್ಯ ಕಾರಣವೆಂದರೆ ಹೆಚ್ಚಾಗುತ್ತಿರುವ ಜನಸಂಖ್ಯೆ. ಜನರು ಬಳಸುವ ವಾಹನಗಳಿಂದ ಕೆಟ್ಟ ಹೊಗೆ ಹೊರಬರುತ್ತದೆ.ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಹೊಗೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ.ಮಾನವನ ಇಂದಿನ ದಿನನಿತ್ಯ ಜೀವನಪದ್ಧತಿಯಿಂದ ಹಾಗೂ ಹೆಚ್ಚು ತ್ತಿರುವ ಕಾರ್ಖಾನೆಗಳಿಂದ ಹೊರಬಿಡುವ ಕಸ ಹಾಗೂ ತ್ಯಾಜ್ಯ ನೀರು ಇವುಗಳಿಂದ ವಾತಾವರಣವು ಮಾಲಿನ್ಯಗೊಳ್ಳುತ್ತದೆ. ವಾಹನಗಳಿಂದ, ಮದುವೆ ಸಮಾರಂಭಗಳಲ್ಲಿ ಹಾಗೂ ದೀಪಾವಳಿಯ ಸಮಯದಲ್ಲಿ ಉಪಯೋಗಿಸುವ ಪಟಾಕಿಯಿಂದ ಶಬ್ದ ಮಾಲಿನ್ಯವಾಗುತ್ತದೆ.ಇದೆಲ್ಲವು ನಮ್ಮ ನಿತ್ಯ ಜೀವನದ ಮೇಲೆಯೇ ಪ್ರಭಾವ ಬೀರುತ್ತದೆ. ಮಾಲಿನ್ಯ ಮಿತಿಮೀರಿದರೆ ಮಾನವನಿಗೆ ಈ ಪರಿಸರದಲ್ಲಿ ಜೀವಿಸುವುದೇ ಅಸಾಧ್ಯವಾಗುತ್ತದೆ. ಆದುದರಿಂದ ಈ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಬ್ದಾರಿ ನಮ್ಮದಾಗಿದೆ. ಮುಂದಿನ ಪೀಳಿಗೆಗೆ ಈ ಪರಿಸರವು ಉಳಿಯಬೇಕಾದರೆ ಇಂದಿನಿಂದಲೇ ಒಳ‍್ಳೆಯ ಬದಲಾವಣೆಯನ್ನು ಮಾಡಬೇಕಾಗಿದೆ.
ಜೂನ್ ತಿಂಗಳಿಗೆ ಒಂದು ವಿಶೇಷತೆ ಇದೆ. ಇದು ವಿಶ್ವ ಪರಿಸರ ದಿನಾಚರಣೆಯ ತಿಂಗಳು. ಇದು ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದದ್ದನ್ನು ನೆನಪಿಸುವ ಮಹತ್ತರವಾದ ದಿನ. ನಾವು ಈ ಪರಿಸರದ ಶಿಶುಗಳು, ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಪುರಾಣ ಕಾಲದಿಂದಲೂ ರಾಜಕುವರರೂ ಋಷಿಗಳ ಆಶ್ರಮದಲ್ಲಿಯೇ ಇದ್ದುಕೊಂಡೇ ಈ ಸಹಜ ಪ್ರಕೃತಿಯ ಮಡಿಲಲ್ಲಿಯೇ ವಿದ್ಯೆ ಕಲಿತರು… ಪರಿಸರವನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಅರಿತರು. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.
ಮಾನವನು ಸಮಾಜಜೀವಿ ಎನ್ನುವಷ್ಟೇ ಸಹಜವಾದದ್ದು ಆತನು ಪರಿಸರದ ಶಿಶು ಎನ್ನುವುದು. ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗಿದೆ, ಹಲವಾರು ಮರಗಿಡಗಳಿವೆ. ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳಿವೆ. ವೈವಿಧ್ಯಮಯವಾದ ಕೀಟ ಪ್ರಪಂಚವಿದೆ. ಅನೇಕ ಸೂಕ್ಷ್ಮ ಜೀವಿಗಳಿವೆ. ಅಷ್ಟೇ ಅಲ್ಲ. ಹಲವಾರು ಚಿಕ್ಕ ದೊಡ್ಡ ನದಿ, ಸಾಗರ ಸರೋವರಗಳಿವೆ. ಸಣ್ಣಪುಟ್ಟ ಗುಡ್ಡ ಬೆಟ್ಟಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ. ಗಾಳಿ, ಬೆಳಕು ಹಾಗು ಅಪರಿಮಿತ ಖನಿಜ ಸಂಪತ್ತಿದೆ.
ನಾವು ನಮ್ಮ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದುಹಾಕುತ್ತೇವೆ. ಇದರಿಂದಾಗಿ ಹಸಿರು ವಿರಳವಾಗುತ್ತಹೋಗುತ್ತಿದೆ. ಈಗಲೆ ಎಚ್ಚೆತ್ತುಕೊಳ್ಳದೆಹೋದರೆ ಈಗಾಗಲೇ ಸುನಾಮಿ, ಬರ, ಮಹಾಪೂರದಂಥ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿರುವುದರ ಜೊತೆಗೆ ಇನ್ನೂ ಅತ್ಯಂತ ದಾರುಣವಾದ ಆಮ್ಲಜನಕದ ಕೊರತೆಯನ್ನು ಕೂಡ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ.
ಹಾಗಾದರೆ ಈ ನಮ್ಮ ಪರಿಸರವನ್ನು, ನಮ್ಮ ವನ್ಯಜೀವಿಗಳನ್ನು, ನಮ್ಮ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಬಗೆಯೆಂತು?ಪರಿಸರ ಎಂಬ ಈ ಜೀವಜಾಲದಲ್ಲಿ ಜೀವಿಗಳು ಒಂದನ್ನೊಂದು ಪ್ರತ್ಯಕ್ಷ ಅಥವ ಪರೋಕ್ಷವಾಗಿ ಅವಲಂಬಿಸಿ ಪರಸ್ಪರ ಪ್ರಭಾವ ಬೀರುತ್ತವೆ . ಈ ರೀತಿಯ ಪರಸ್ಪರ ಅವಲಂಬನೆಯು ಸಕಲ ಜೀವಿಗಳನ್ನೂ ಆಹಾರ ಸರಪಳಿಯ ರೂಪದಲ್ಲಿ ಬೆಸೆದು, ಅವುಗಳ ಪರಸ್ಪರ ಪ್ರಭಾವಗಳನ್ನು ಇನ್ನೂ ನಿಕಟಗೊಳಿಸಿ ಈ ಜೀವಜಾಲವನ್ನಾಗಿಸಿದೆ. ಅಂಥ ಈ ಜೀವಜಾಲದ ಸರಪಣಿಯನ್ನು ನಾವು ನಿರಂತರವಾಗಿ ಉಳಿಸಬೇಕಾಗಿದೆ. ಗಿಡಮರಗಳನ್ನು ಕಡಿಯುವಾಗ ಒಂದಕ್ಕೆರಡು ಮರಗಳನ್ನು ನೆಡಬೇಕು. ಈ ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳಾದ ಪ್ಲಾಸ್ಟಿಕ್ ಇತ್ಯಾದಿಗಳ ಅನಧಿಕೃತ ಮಾರಾಟವನ್ನು ತಡೆಗಟ್ಟಬೇಕು. ಪರಿಸರಕ್ಕೆ ಹಾನಿಯಾಗದ ಅಗ್ಗದ ಇಂಧನಮೂಲಗಳ ಅನ್ವೇಷಣೆ ಮುಂದುವರಿಯಬೇಕು. ಅಷ್ಟೇ ಅಲ್ಲ, ಬಡವ ಬಲ್ಲಿದರಾದಿಯಾಗಿ ಎಲ್ಲರೂ ಈ ಇಂಧನವನ್ನು ಉಪಯೋಗಿಸುವಂತಾಗಬೇಕು. ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣುಗಳ, ನದಿಯಲ್ಲಿಯ ಉಸುಕು, ಕಲ್ಲುಬೆಟ್ಟಗಳನ್ನು ಸಂರಕ್ಷಿಸುವುದು, ಜೈವಿಕ ತಂತ್ರಜ್ನಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದರ ಮಹತ್ವವನ್ನು ಸಾಮಾನ್ಯ ನಾಗರಿಕರೂ ಅರಿಯಬೇಕು. ಇದಕ್ಕಾಗಿ ನಾವು ನಮ್ಮ ನಾಳಿನ ನಾಗರಿಕರಾದ ಮಕ್ಕಳಿಗೆ ಕೂಡ ಶಾಲೆಗಳಲ್ಲಿ ಈ ಬಗ್ಗೆ ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಕುರಿತು ತಿಳಿಸುವ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ಇದರ ಉತ್ತಮ ಫಲಿತಾಂಶ ಸಿಗುತ್ತದೆ. ಪಠ್ಯ ಪುಸ್ತಕದಲ್ಲೂ ಪರಿಸರ ಸಂರಕ್ಷಣೆಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಪರಿಸರ ಶಿಕ್ಷಣ ನಮ್ಮ ಸುತ್ತಮುತ್ತಲಿನ ಪರಿಸರ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯವನ್ನು ಬಲಪಡಿಸುವ ಒಂದು ಕಲಿಕೆಯ ಸಾಧನವಾಗಿದೆ. ಮಕ್ಕಳು ಇಂಥ ದಿನಾಚರಣೆಗಳಂದು ಘೋಷಣೆಗಳನ್ನು ಬರೆದು ಪ್ರಚಾರಮಾಡಬೇಕು. ಪರಿಸರ ರಕ್ಷಣೆಯ ಈ ಘೋಷಣೆಗಳು ಒಂದು ದಿನದ ಘೋಷಣೆಗಳಾಗಿಯೇ ಉಳಿಯದೆ, ಆಚರಣೆಗೂ ಬರುವಂತಾಗಬೇಕು. ಮನೆ ಆವರಣ ಮತ್ತು ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಈ ವಿಷಯದಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿ. ಪ್ರತಿಯೊಬ್ಬ ನಾಗರಿಕರಲ್ಲೂ ಪರಿಸರದ ಬಗ್ಗೆ ಈ ಜಾಗೃತಿ ಮೂಡಬೇಕು. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು, ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ. ಬನ್ನಿ.