prabhanda in Kannada about covid - 19
Answers
Answer:
ಕೋವಿಡ್-೧೯ ಎನ್ನುವುದು ಒಂದು ಸೋಂಕು ರೋಗ. ಇದನ್ನು ಉಂಟು ಮಾಡುವ ವೈರಸ್ಸು ಕೊರೊನಾ ವೈರಸ್ ಬಗೆ. ಇದರಲ್ಲಿ ಕಿರೀಟದಲ್ಲಿ ಇರುವಂತಹ ಮುಳ್ಳುಗಳಂತಹ ರಚನೆಗಳು ಇರುವುದರಿಂದ ಕೊರೊನಾ ಎನ್ನುವ ಹೆಸರು ಬಂದಿದೆ. ಕೊರೊನಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟ ಎಂದು ಅರ್ಥ.
ವೈರಸ್ಸುಗಳು ಮನುಷ್ಯರಲ್ಲಿ ಹಲವು ಖಾಯಿಲೆಗಳನ್ನು ಉಂಟು ಮಾಡುತ್ತವೆ. ಪೋಲಿಯೋ, ದಡಾರ, ಫ್ಲೂ, ಮತ್ತು ನೆಗಡಿ ಇಂತಹ ಕೆಲವು ಖಾಯಿಲೆಗಳು. ಇವುಗಳಲ್ಲಿ ಕೆಲವಕ್ಕೆ ಲಸಿಕೆಗಳು ಇವೆ. ನಾವು ಚಿಕ್ಕವರಿರುವಾಗ ನಮಗೆ ನೀಡುವ ಲಸಿಕೆಗಳು ಈ ರೋಗಗಳಲ್ಲಿ ಕೆಲವನ್ನು ತಡೆಯಬಲ್ಲವು. ಎಲ್ಲವನ್ನೂ ಅಲ್ಲ. ಫ್ಲೂ ತಡೆಯಲು ಒಂದು ಲಸಿಕೆ ಇದೆ. ಇದನ್ನು ದೊಡ್ಡವರಾದ ಮೇಲೂ ಚುಚ್ಚಿಸಿಕೊಳ್ಳಬಹುದು. ಆದರೆ ಸರಿಯಾಗಿ ರಕ್ಷಣೆ ಪಡೆಯಲು ಪ್ರತಿ ವರ್ಷವೂ ಇದನ್ನು ಚುಚ್ಚಿಸಿಕೊಳ್ಳಬೇಕು. ನಮ್ಮ ದೇಹದ ರೋಗ ರಕ್ಷಣಾ ವ್ಯವಸ್ಥೆಯು ವೈರಸ್ಸು ದೇಹವನ್ನು ಹೊಕ್ಕ ಕೂಡಲೇ ಗುರುತಿಸಿ ಅದರ ಜೊತೆ ಹೋರಾಡುವಂತೆ ಈ ಲಸಿಕೆಗಳು ದೇಹವನ್ನು ಸಿದ್ಧಪಡಿಸುತ್ತವೆ.
ಆದರೆ ನಮ್ಮ ದೇಹಕ್ಕೆ ಪರಿಚಯವೇ ಇಲ್ಲದ ವೈರಸ್ಸು ದೇಹವನ್ನು ಹೊಕ್ಕಾಗ ಸಮಸ್ಯೆ ಉಂಟಾಗುತ್ತದೆ. ಹಂದಿ, ಕೋಳಿ, ಬಾವಲಿಗಳೇ ಮುಂತಾದ ಹಕ್ಕಿ ಪ್ರಾಣಿಗಳಲ್ಲಿ ಇರುವಂತಹ ವೈರಸ್ಸುಗಳು ನಮ್ಮ ದೇಹವನ್ನು ಹೊಕ್ಕಾಗ ಹೀಗಾಗುತ್ತದೆ. ಕೆಲವೊಮ್ಮೆ ಇವು ಮನುಷ್ಯರನ್ನು ತಾಕಬಹುದು. ಆಗ ಮನುಷ್ಯರಲ್ಲಿ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೋವಿಡ್-19 ಇಂತಹ ಒಂದು ಸೋಂಕು. ಇದಕ್ಕೆ ಕಾರಣವಾದ ವೈರಸ್ಸು ಬಾವಲಿಗಳಿಂದ ಬಂದಿರಬೇಕು ಎಂದು ನಂಬಲಾಗಿದೆ.
ಹಲವು ಕಾರಣಗಳಿಂದಾಗಿ ಕೋವಿಡ್-19ರ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ಮೊದಲನೆಯದಾಗಿ, ಇದು ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡುವ ಸೋಂಕು. ಜೊತೆಗೆ ಇದು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಎರಡನೆಯದಾಗಿ, ಸೋಂಕು ತಗುಲಿದ ಕೆಲವರಿಗೆ ಇದು ಮಾರಕವಾಗಬಹುದು. ಮೂರನೆಯದಾಗಿ, ನಮ್ಮ ದೇಹಕ್ಕೆ ಇದನ್ನು ತಡೆಯುವ ಸಹಜ ಸಾಮರ್ಥ್ಯ ಇಲ್ಲ. ಇದನ್ನು ತಡೆಯಬಲ್ಲ ಲಸಿಕೆಗಳೂ ಇಲ್ಲ. ಮತ್ತು ಸದ್ಯಕ್ಕೆ ಅದನ್ನು ಗುಣಪಡಿಸುವ ಔಷಧಿಗಳೂ ಇಲ್ಲ.
ಈ ಖಾಯಿಲೆ ಮನುಷ್ಯರ ಮೇಲೆ ಬೀರುವ ಪರಿಣಾಮವೇನು ಹಾಗೂ ಈ ಸೋಂಕು ಹರಡುವುದು ಹೇಗೆ?
ಸೋಂಕು ತಗುಲಿದ ಬಹುತೇಕ ಜನರಿಗೆ ಫ್ಲೂ ಬಂದಾಗ ಕಾಣುವಂತಹ ಲಕ್ಷಣಗಳೇ ಇರುತ್ತವೆ. ಏರು ಜ್ವರ, ಒಣ ಕೆಮ್ಮು ಮತ್ತು ಸುಸ್ತು ಸಾಮಾನ್ಯ. ಕೆಲವರಿಗೆ ಮೈ ಕೈ ನೋವು, ಉಸಿರಾಟದ ತೊಂದರೆ, ಸ್ನಾಯುಗಳು ಹಾಗೂ ಸಂಧಿಗಳ ನೋವು, ಗಂಟಲು ನೋವು, ತಲೆನೋವು, ಛಳಿ, ಮತ್ತು ಒಮ್ಮೊಮ್ಮೆ ಬೇಧಿ ಕೂಡ ಕಾಣಿಸಬಹುದು ಈ ಖಾಯಿಲೆ ಮಕ್ಕಳು, ಯುವಕರಿಗಿಂತಲೂ ವಯಸ್ಸಾದವರನ್ನು ಹೆಚ್ಚು ಬಾಧಿಸುವಂತೆ ತೋರುತ್ತದೆ. ಒಂಭತ್ತು ವರ್ಷ ವಯಸ್ಸಿನೊಳಗೆ ಇರುವ ಮಕ್ಕಳನ್ನು ಇದು ಹೆಚ್ಚು ಬಾಧಿಸುವುದಿಲ್ಲ. ಆದರೆ ಡಯಾಬಿಟೀಸು, ಹೃದಯದ ತೊಂದರೆಗಳು, ಶ್ವಾಸಕೋಶದ ತೊಂದರೆಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹವರಲ್ಲಿ ಇದರ ಪರಿಣಾಮ ಹೆಚ್ಚು. ಐದರಲ್ಲಿ ಒಬ್ಬ ರೋಗಿ ನ್ಯುಮೋನಿಯಾದಂತಹ ಬಲು ತೀವ್ರವಾದ ಸಂಕಟದಿಂದ ನರಳುತ್ತಾರೆ.