speech on itihasa of language kannada in kannada
Answers
ಕನ್ನಡದ ಇತಿಹಾಸ
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು.ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;
★ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ,
★ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ
★ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲ ಘಟ್ಟದವರೆಗೆ.
ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.
ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.