my favorite novel essay in kannada
Answers
ಪೂರ್ಣಚಂದ್ರ ತೇಜಸ್ವಿಯವರ
ಕರ್ವಾಲೊ
ನಮ್ಮೆಲ್ಲರ ನೆಚ್ಚಿನ ಬರಹಗಾರ, ಕಥೆಯನ್ನು ಹೇಳುವ ಕಲೆಯಲ್ಲಿ ನಿಸ್ಸೀಮ ಈ ಕೃತಿಯಲ್ಲಿ ಓದುಗರನ್ನು ಒಂದು ಸಾಹಸಯುಥ ಯಾನಕ್ಕೆ ಕರೆದೊಯ್ಯುತ್ತಾರೆ. ಇವರ ಅಧುನಿಕ ಪ್ರಪಂಚದ ಸಂತರೆಂದು ಹೇಳಬಹುದು. ಈ ಪುಸ್ತಕದಲ್ಲಿ, ತೇಜಸ್ವಿ ಅವರು ಇದ್ದು ಕಂಡಂತಹ ಮಲೆನಾಡಿನ ಅದ್ಭುತ ಚಿತ್ರಣವೊಂದು ನಮ್ಮ ಕಣ್ಣಿನ ಮುಂದೆ ಬಂದು ಹಾಯ್ದುಹೊಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಕಾಡಿನ ವಿಸ್ಥಾರತೆ, ಅಲ್ಲಿನ ಜನಜೀವನ, ಕಷ್ಟ ಕಾರ್ಪಣ್ಯಗಳು ಎಲ್ಲವು ಹಾಸ್ಯರೂಪದಲ್ಲಿ ಬರೆದಿದ್ದಾರೆ.
ಈ ಕಥೆಯಲ್ಲಿ ತೇಜಸ್ವಿ ರವರು ನಿರೂಪಕನ ಪಾತ್ರ ವಹಿಸಿದ್ದಾರೆ. ಅವರ ದಿನಚರಿಯಲ್ಲಿ ಎದುರಾಗುವ ಪಾತ್ರಗಳಾದ ಮದುವೆ ಮಂದಣ್ಣ, ಕೀಟ ವಿಜ್ಞಾನಿ ಕರ್ವಾಲೊ, ಛಾಯಾಗ್ರಾಹಕ ಪ್ರಭಾಕರ, ಬಿರಿಯಾನಿ ಕರಿಯಪ್ಪ ನವರನ್ನು ಸೃಷ್ಟಿಸಿ ತಾವು ಓದಿ ತಿಳಿದುಕೊಂದಿರುವಂಥಹ ಪರಿಸರ ಜ್ಞಾನವನ್ನು ಇವರೆಲ್ಲರ ಮುಖಾಂತರ ಅದ್ಭುತವಾಗಿ, ಕುತೂಹಲ ಹುಟ್ಟಿಸುವಹಾಗೆ ತಿಳಿಹೇಳಿದ್ದಾರೆ. ತವಕವನ್ನುಂಟುಮಾಡುವ ಹಾರುವ ಒತಿಕ್ಯಾತದ ಹುಡುಕಾಟದ ಪ್ರಸಂಗ ಮೈ ಜುಮ್ಮೆನ್ನುವಂತೆ ಮಾಡುತ್ತದೆ.
ಹಾಸ್ಯಕ್ಕೆ ಈ ಪುಸ್ತಕದಲ್ಲಿ ಸಾಕಷ್ಟು ಪ್ರಾಧಾನ್ಯತೆ ಸಿಕ್ಕಿದೆ. ಓದುತ್ತಿರಲು ಎಷ್ಟೊಂದು ಧ್ರುಷ್ಟಾಂಥಗಳು ನನ್ನನ್ನು ಗೊಳ್ಳೆಂದು ನಗುವಂತೆ ಮಾಡಿದೆ. ಮಂದಣ್ಣನ ಮೇರೆಜು (Marriage) ಪ್ರಸಂಗ, ಬಿರಿಯಾನಿ ಕರಿಯಪ್ಪನ ಶಿಕಾರಿ ಕಾಂಡ – ಕಂಡ ಪ್ರಾಣಿಯನ್ನೆಲ್ಲ ಹೊಡೆದು ತಿನ್ನುವ ಚಪಲ, ಮನೆಗೆಲಸಗಾರ ಪ್ಯಾರನ ಮಂದ ಬುದ್ಧಿ, ಆ ಪ್ರದೇಶದ ಬೈಗುಳಗಳು. ಉದಾಹರಣೆಗೆ, ಮಂದಣ್ಣನ ಮನೆಯಲ್ಲಿ ಹಂದಿ ಮಾಂಸದ ಅಡುಗೆ ಮಾಡಲು ಬೆಳಿಗ್ಗೆ ಹಂದಿಗಳನ್ನು ಎಳೆದುಕೊಂಡು ಹೋಗುತ್ತಿರಲು, ಅವುಗಳ ಆರ್ತನಾದ ಕೇಳಿ ಎಚ್ಚೆತ್ತ ಪ್ಯಾರ ಹೀಗೆ ಬೈಯ್ಯುತ್ತಾನೆ – “ತುತ್ತೇರಿ, ಸುವ್ವರೋ ಕ ಬೊಮ್ದ”. ಇದನ್ನು ಓದಿದ ನಂತರವಂತೂ ನೆನೆಸಿ ನಕ್ಕಿದ್ದು ಉಂಟು.
ಪ್ರಕೃತಿ ಮತ್ತು ಮಲೆನಾಡು, ಇವುಗಳ ಬಗ್ಗೆ ತೇಜಸ್ವಿ ಅವರ ನಿಪುಣತೆ ಇಲ್ಲಿ ವ್ಯಕ್ತವಾಗುತ್ತದೆ. ಎಷ್ಟೊಂದು ವಿಷಯಗಳನ್ನು ತಿಳಿಸಿಕೊಡುತ್ತಾರೆ ಕೂಡ. ಇದರ ಬಗ್ಗೆ ಕುತೂಹಲ ಕೆರಳಿ ಅವುಗಳ ಕುರಿತು ನಾ ಹುಡುಕಿದ್ದು ನಿಜವೆ. ಗುರುಗಿ ಹಳದಿಂದ ಎಂಟು ವರ್ಷಕ್ಕೊಮ್ಮೆ ಅತ್ಯದಿಕ ಪ್ರಮಾಣದಲ್ಲಿ ಜೇನಿನ ಉತ್ಪಾದನೆ, ಜೇನು ಸಾಕಾಣಿಕೆಯ ಹಲವಾರು ವಿಧಾನಗಳು, ಪೆಟ್ಟಿಗೆ ಕಟ್ಟುವುದು, ಆರ್ಮಿ ವರ್ಮ್ ಗಳು, ಮೌ ಮೌ ದುಂಬಿ ಅನ್ನೋ ಪ್ರಚೋದನೆಯೇ ಇಲ್ಲದೆ ಕಚ್ಚುವ ಜೇನು, ಕೊಕನಕ್ಕಿಯ ಜೀವನ ಶೈಲಿ – ಪೊಟರೆಯಲ್ಲಿ ಹೆಣ್ಣು ಹಕ್ಕಿ ಮೊಟ್ಟೆಗಳಿಗೆ ಕಾವು ಕೊಡುವುದು ಮತ್ತೆ ಗಂಡು ಹಕ್ಕಿ ಇವರಿಗೆ ಊಟ ತರಲು ಹೋದ ಗಂಡು ಹಕ್ಕಿ ಮರಳಿ ಬರಲಿಲ್ಲವೆಂದರೆ ಇವುಗಳು ಪೋತರೆಯಲ್ಲೇ ಇದ್ದು ಸಾವನ್ನಪ್ಪುತ್ತವೆ, ಗ್ಲೌ ವರ್ಮ್ ಹೀಗೆ ಸುಮಾರು ಉದಾಹರಣೆಗಳು ಕೊಡುತ್ತ ಹೋಗುತ್ತಾರೆ. ನಾವು ಕಂಡಕ್ಕಿಂಥ ನೋಡಕ್ಕಿರುವುದು ಸಾಕಷ್ಟಿದೆಯೆಂದು ತಿಳಿಸುತ್ತ ಅನ್ವೇಷನಶೀಲತೆ ತುಂಬುವುದರಲ್ಲಿ ಯಶಸ್ವಿಯಾಗಿದ್ದಾರೆ.
ಕುತೂಹಲವೇ ಜ್ಞಾನೋದಯಕ್ಕೆ ಹಾದಿ ಎನ್ನುವ ತತ್ತ್ವವನ್ನು ಪರೋಕ್ಷವಾಗಿ ಓದುಗರ ಮುಂದಿಡುತ್ತಾರೆ. ಕಾಡಿನ ಕಷ್ಟ, ಬೇಸಾಯದಿಂದ ಉಂಟಾದ ನಷ್ಟ, ಕೀಟಗಳೆಂದರೆ ತೊಂದರೆ ಎಂದೇ ತಿಳಿದಿದ್ದ ತೇಜಸ್ವಿ ಅವರು ಕರ್ವಾಲೋ ಜೊತೆ ಸೇರಿ ಹಾರುವ ಓತಿಯನ್ನು ಹುಡುಕಹೊರಟಾಗ ಅವರಲ್ಲಾಗುವ ಬದಲಾವಣೆಗಳು ಅವರ ಯೋಚನೆಯ ದಿಕ್ಕನ್ನೇ ಬದಲಿಸುತ್ತದೆ. ಇದೆಲ್ಲವೂ ಅವರ ಕುತೂಹಲದ ಪ್ರತಿಫಲವೇ. ಈ ಗುಣವನ್ನು ನಾವು ನಮ್ಮಲ್ಲಿ ಅಳವಡಿಸಿಕೊಂಡು ಹೋದರೆ ಒಳಿತೆಂದರೆ ಹಲವಾರು ಉದಾಹರಣೆಗಳ ಮೂಲಕ ತಿಳಿಸುತ್ತಾರೆ.
ಒಟ್ಟಿನಲ್ಲಿ ಹಾಸ್ಯಲೇಪಿತ, ತತ್ತ್ವಾಂಶಗಳುಳ್ಳ, ಕುತೂಹಲ ಹುಟ್ಟಿಸುವಂತಹ, ತವಕವನ್ನುಂಟುಮಾಡುವ, ಅತ್ಯದ್ಬುತ ಕಥೆ ಕರ್ವಾಲೊ.